ತಿರುವಾಯೂರ್
	ಒಂದು ಶೈವಕ್ಷೇತ್ರ.  ತಮಿಳು ನಾಡಿನ ತಂಜಾವೂರು ಜಿಲ್ಲೆಗೆ ಸೇರಿದ್ದು.  ತಂಜಾವೂರಿನಿಂದ ಏಳು ಮೃಲಿ ದೂರದಲ್ಲಿ ಕಾವೇರಿ ನದಿ ದಂಡೆಯ ಮೇಲಿದೆ.  ತಿರುವೈಯಾರು ಎಂದೂ ಇದನ್ನು ಕರೆವುದಿದೆ.  ಇಲ್ಲಿ ಕೋಲೇರೂನ್, ಕಾವೇರಿ ಕೋಮರುತೀ, ವೇತರ್ ಮತ್ತು ವೆನ್ನರ್ ಎಂಬ ಐದು ನದಿಗಳು ಹರಿಯುತ್ತದೆ. ಇಲ್ಲಿನ ಪಂಚನದೀಶ್ವರನ (ಪಂಚನಾಥೇಶ್ವರ ವಾಲ್ಮೀಕೇಶ್ವರ) ದೇವಸ್ಥಾನ ಪ್ರಮುಖವಾದುದ್ದು.  ಇದನ್ನು ಅಲ್ಲಿನ ಸ್ಥಳಿಕರು ಅಯ್ಯಾರಪ್ಪರ್ ಮಂದಿರ ಎನ್ನುತ್ತಾರೆ.  ಇಲ್ಲಿ ತಾಮ್ರ ಮೂರ್ತಿ ಸುಂದರವಾಗಿದೆ.  ದೇವಸ್ಥಾನದ ಶಿಲ್ಪ ಚೋಳರ ಕಾಲದ್ದಾಗಿದ್ದು, ಚೋಳರಾಜರು ಇದನ್ನು ಅನೇಕ ಸಲ ಜೀರ್ಣೋದ್ಧಾರ ಮಾಡಿದ ಸಂಗತಿ ಅಲ್ಲಿಯ ಶಿಲಾಲೇಖಕದಲ್ಲಿ ಕಂಡು ಬರುತ್ತದೆ. ಈ ಮಂದಿರದ ಎಡ್-ಬಲದಲ್ಲಿ ದಕ್ಷಿಣ ಕೈಲಾಸ, ಉತ್ತರ ಕೈಲಾಸ ಎಂಬ ಎರಡು ದೇವಸ್ಥಾನಗಳಿವೆ.  ಪಕ್ಕದಲ್ಲಿ ಒಂದು ಪವಿತ್ರ ಕುಂಡವೂ ಧರ್ಮಸಂವರ್ದಿನಿದೇವಿಯ ಮಂದಿರವೂ ಇದೆ.  ಪ್ರತಿ ಚೈತ್ರಮಾಸದಲ್ಲಿ ಉತ್ಸವ ನಡೆಯುತ್ತದೆ. 

	ಪ್ರಸಿದ್ಧ ಶೈವ ಸಂತ ಅಪ್ಪರ್ ಕೈಲಾಸ ಯಾತ್ರೆಗೆಂದು ಹೊರಟಾಗ ಪ್ರತ್ಯಕ್ಷ ಶಿವನೇ ಬ್ರಾಹ್ಮಣ ವೇಷ ಧರಿಸಿ ಬಂದು ಅವರಿಗೆ ದಾರಿ ತೋರಿದನೆಂದು ಒಂದು ಐತಿಹ್ಯವಿದೆ.  ಈ ಕಾರಣದಿಂದ ಇಲ್ಲಿನ ಸ್ಥಾನ ಮಹಿಮೆ ಕಾಶಿ ಅಥವಾ ಕೈಲಾಸಕ್ಕೆ ಸಮನಾಗಿದೆ ಎಂದು ಹೇಳುತ್ತಾರೆ.  ಸಂಗೀತ ವಿದ್ವಾಂಸ ಶಾಮಾಶಾಸ್ತ್ರಗಳಿಗೆ ಇದು ಜನ್ಮಸ್ಥಳ.  ಸಂತ ತ್ಯಾಗರಾಜರು ಇಲ್ಲಿಯೇ ಹುಟ್ಟಿ ಇಲ್ಲಿಯೇ ದೇಹ ತ್ಯಾಗ ಮಾಡಿದರು.  ಇವರ ಜ್ಞಾಪಕಾರ್ಥವಾಗಿ ಇಲ್ಲಿ ಈಗ ಒಂದು ಮಂದಿರ ಏರ್ಪಟ್ಟಿದೆ.  ಪ್ರತಿವರ್ಷವೂ ಇಲ್ಲಿ ತ್ಯಾಗರಾಜರ ಜಯಂತಿ ಕಾಲದಲ್ಲಿ ಇಡೀ ಭಾರತದ, ಮುಖ್ಯವಾಗಿ ದಕ್ಷಿಣ ದೇಶದ ಪ್ರಸಿದ್ಧ ಸಂಗೀತಗಾರರು ಸೇರಿ ತ್ಯಾಗರಾಜರಿಗೆ ಸೇವೆ ಸಲ್ಲಿಸುತ್ತಾರೆ.  ಸಂಗೀತ ವಿಚಾರವಾಗಿ ವಿಚಾರಗೋಷ್ಠಿಗಳನ್ನು ನಡೆಸುತ್ತಾರೆ.
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ